ಬೃಹದಾರಣ್ಯಕೋಪನಿಷತ್ತು
ಪ್ರಸಿದ್ಧವಾದ ಉಪನಿಷತ್ತುಗಳಲ್ಲಿ ಒಂದು.  ಉಪನಿಷತ್ತುಗಳು ಆಧ್ಯಾತ್ಮಿಕ ಮಾನಸ ಸರೋವರ (ನೋಡಿ- ಉಪನಿಷತ್ತುಗಳು).  ಮಾನವ ಜೀವನದ ಕಟ್ಟಕಡೆಯ ಗುರಿಯನ್ನು ಕುರಿತು ತಪೋಧನರಾದ ಮಹರ್ಷಿಗಳು ನಡೆಯಸಿದ ಜಿಜ್ಞಾಸೆ, ಅನುಭಾವಗಳ ಆಳ-ಅಗಲಗಳು; ಎತ್ತರ-ಬಿತ್ತರಗಳ ವಿಲಾಸವನ್ನು ಉಪನಿಷತ್ತುಗಳಲ್ಲಿ ಕಾಣಬಹುದು.  ದೇಹ, ಇಂದ್ರಿಯ, ಮನಸುಗಳ ವಿಶ್ಲೇಷಣೆ; ಜೀವಾತ್ಮ ಪರಮಾತ್ಮದ ಅಲೌಕಿಕಾನುಭವ ಇಲ್ಲಿ ಮುಗಿಲು ಮುಟ್ಟಿದೆ.  ಬ್ರಹ್ಮಸಾಕ್ಷಾತ್ಕಾರವೇ ಜೀವನದ ಗುರಿ.  ಯೋಗ ಇದನ್ನು ಸಾಧಿಸುವ ಉಪಕರಣ, ಭಗವದರ್ಪಣಭಾವದಿಂದ ದುಡಿವುದು (ನಿಷ್ಕಾಮ ಕ್ರಿಯೆ) ಜೀವನದ ಪರಮಾರ್ಥ ಎಂಬುದು ಉಪನಿಷತ್ತುಗಳ ಮುಖ್ಯ ಲಕ್ಷ್ಯ.  

	ಉಪನಿಷತ್ತುಗಳಲ್ಲಿ ಬೃಹದಾರಣ್ಯಕ ಅತ್ಯಂತ ಪ್ರಾಚೀನವೆಂದು ಪರಿಗಣಿತವಾಗಿದೆ.  ಇದು ಶುಕ್ಲ ಯಜರ್ವೇದ ಶಾಖೆಗೆ ಸೇರಿದ್ದು.  ಇದÀರಲ್ಲಿ ಆರು ಅಧ್ಯಾಯಗಳು ನಲವತ್ತೇಳು ಬ್ರಾಹ್ಮಣಗಳು ಇವೆ.  ಈ ಉಪನಿಷತ್ತಿನಲ್ಲಿ ಶಾಂತಿ ಮಂತ್ರ ಪೂರ್ಣಮದಃ ಪೂರ್ಣಮಿದಂ ಎಂಬುದು.  

	ಇದರ ಮೊದಲ ಅಧ್ಯಾಯದಲ್ಲಿ ಆರು ಬ್ರಾಹ್ಮಣಗಳಿವೆ.  ಇಲ್ಲಿ ಯಜ್ಞಕ್ಕೆ ಸಂಬಂಧಿಸಿದ ಅಶ್ವದ ಅರ್ಥಗರ್ಭಿತ ವರ್ಣನೆಯಿದೆ.  ವಿರಾಟ್ ಪುರಷನೇ ಆ ಅಶ್ವ.  ಎಲ್ಲಕ್ಕಿಂತ ಶ್ರೇಷ್ಠ ವಸ್ತು ಆತ್ಮ ಎಂದು ಹೇಳಿದೆ.  
 
                        ಅಸತೋ ಮ ಸದ್ಗಮಯ
                         ತಮಸೋ ಮಾ ಜ್ಯೋತಿರ್ಗಮಯ
                         ಮೃತ್ಯೋರ್ಮಾಮಮೃತಂಗಮಯ

ಅಸತ್ತಿನಿಂದ ಸತ್ತಿನೆಡೆಗೆ, ಕತ್ತಲಿನಿಂದ ಬೆಳಕಿನೆಡೆಗೆ, ಮೃತ್ಯುವಿನಿಂದ ಅಮೃತತ್ವದೆಡೆಗೆ ನನ್ನನ್ನು ಒಯ್ಯಿ ಎಂಬ ಅರ್ಥ ಗರ್ಭಿತವಾದ ಪವಮಾನ ಮಂತ್ರದಿಂದ ಮೂರನೆಯ ಬ್ರಾಹ್ಮಣ ಮುಗಿಯುತ್ತದೆ.  ಮುಂದೆ ಮೊತ್ತಮೊದಲು  ಜೀವ ಶರೀರಧಾರಣ ಮಾಡಿದಾಗ ಅವನಿಗೆ ಅಹಂ (ನಾನು) ಎಂಬ ಅನುಭವವಾಯಿತು.  ಆಗ ಅವನು ಹೆದರಿದ.  ಯಾರಿಗೆ ಹೆದರಬೇಕು? ಎಂದು ವಿಚಾರ ಮಾಡಿದಾಗ ಎರಡನೆಯವನಿದ್ದರಲ್ಲವೆ ಹೆದರಬೇಕು ಇರುವವ ಒಬ್ಬನೇ ಎಂದ ಮೇಲೆ ಹೆದರುವುದೇಕೆ?  ಅದಕ್ಕಾಗಿ ಅವನು ಎರಡನೆಯದನ್ನು ಬಯಸಿದ.  ಅದೇ ಶಿವ-ಶಕ್ತಿ ಸ್ವರೂಪದ ಹಿನ್ನೆಲೆ ಅವರು ಪರಸ್ಪರ ಅಪ್ಪಿದಾಗ ಆನಂದವಾಯಿತು.  ಇಲ್ಲಿಗೆ ಒಂದನೆಯ ಅಧ್ಯಾಯ ಮುಗಿಯುತ್ತದೆ.

	ಎರಡನೆಯ ಅಧ್ಯಾಯದಲ್ಲಿ ಆರು ಬ್ರಾಹ್ಮಣಗಳಿವೆ.  ಮೊದಲ ಬ್ರಾಹ್ಮಣದಲ್ಲಿ ಬಾಲಾಕಿ ಎಂಬ ಜಂಭದ ಬ್ರಾಹ್ಮಣನೊಬ್ಬ ಅಜಾತಶತ್ರು ಎಂಬ ಅರಸನಲ್ಲಿಗೆ ಬಂದು ತಾನು ಬ್ರಹ್ಮಜ್ಜನೆಂದು ವಿಜೃಂಭಿಸಿದ.  ಆ ಬಗ್ಗೆ ಅರಸು ಕೇಳಿದ ಪ್ರಶ್ನೆಗಳಿಗೆ ಉತ್ತರಿಸಲಾರದೆ ಅವನು ಬೆಪ್ಪಾಗಿ ಕುಳಿತ.  ಅರಸನೇ ಅವನಿಗೆ ಜೇಡರ ಹುಳು ಮತ್ತು ಅದರಿಂದ ಹೊರಡುವ ಎಳೆ (ತಂತು) ಗಳ ದೃಷ್ಟಾಂತವಿತ್ತು.  ವಿಜ್ಞಾನ ಪುರುಷನ ಪರಿಚಯ ಮಾಡಿಕೊಡುತ್ತಾನೆ.  

	ನಾಲ್ಕನೆಯ ಬ್ರಾಹ್ಮಣದಲ್ಲಿ ಯಾಜ್ಞವಲ್ಕ್ಯ ವಾನಪ್ರಸ್ಥಾಶ್ರಮಕ್ಕೆ ತೆರಳುವಾಗ ತಾನು ಗಳಿಸಿದ್ದ ಆಸ್ತಿಪಾಸ್ತಿಗಳನ್ನು ಹೆಂಡತಿ ಮೈತ್ರೇಯಿಗೆ ಬಿಟ್ಟು ಹೋಗುವದೆಂದಾಗ ಬ್ರಹ್ಮವಾದಿನಿಯಾದ ಅವಳು ಪ್ರಶ್ನಿಸುತ್ತಾಳೆ.  ಸ್ವಾಮಿ, ಈ ಆಸ್ತಿ ಪಾಸ್ತಿಗಳಿಂದ ನಿತ್ಯಸುಖ ಲಭಿಸುವುದೆ? ಎಂದು.  ಆಗ ಋಷಿ ಇಲ್ಲ; ನಿತ್ಯ ಸುಖ ಕೇವಲ ಬ್ರಾಹ್ಮಜ್ಞಾನದಿಂದ ಮಾತ್ರವೇ ಲಭಿಸುತ್ತದೆ ಎಂದು ಹೇಳಿ ಆತ್ಮ ತತ್ವವನ್ನು ಉಪದೇಶಿಸಿದ್ದು ಸ್ವಾರಸ್ಯವಾಗಿದೆ. ಸತಿಗೆ ಪತಿ ಪ್ರಿಯನಾಗುವುದು ಅವಳ ಸುಖಕ್ಕಾಗಿಯೇ ಹೊರತು ಪತಿಯ ಸುಖಕ್ಕಾಗಿ ಅಲ್ಲ; ಪತಿಗೆ ಸತಿ ಪ್ರಿಯಳಾಗುವುದು ಅವನ ಸುಖಕ್ಕಾಗಿಯೇ ಹೊರತು ಸತಿಯ ಸುಖಕ್ಕಾಗಿ ಅಲ್ಲ.  ಇದರಂತೆ ಮಕ್ಕಳು ಆಸ್ತಿ ಪಾಸ್ತಿಗಳೆಲ್ಲವೂ ತನ್ನ ಸುಖಕ್ಕಾಗಿಯೇ ಹೊರತು ಅವರ ಸುಖಕ್ಕಾಗಿ ಅಲ್ಲ.  ಯಾವ ಆತ್ಮನ ಸುಖಕ್ಕಾಗಿ ಅಥವಾ ಪ್ರೀತಿಗಾಗಿ ಇವೆಲ್ಲವೂ ಪ್ರಿಯವಾಗುವುವೊ ಅಂಥ ಆತ್ಮನೊಬ್ಬನೇ ನೋಡತಕ್ಕವ, ಕೇಳತಕ್ಕವ, ಮನನ ಮಾಡತಕ್ಕವ, ನಿದಿ ಧ್ಯಾನಮಾಡತಕ್ಕವ, ಎಲೌಮೈತ್ರೇಯಿ, ಅಂಥ ಆತ್ಮನ ದರ್ಶನ, ಶ್ರವಣ, ಮನನ ಮತ್ತು ಪೂರ್ಣಜ್ಞಾನದಿಂದ ಎಲ್ಲವೂ ತಿಳಿಯುತ್ತದೆ.  ಎಂದು ಮೈತ್ರೇಯಿಗೆ ಬ್ರಹ್ಮಜ್ಞಾನದ ಸೂಕ್ಷ್ಮವನ್ನು ಯಾಜ್ಞವಲ್ಕ್ಯ ತಿಳಿಸುತ್ತಾನೆ.  ಈ ಅಧ್ಯಾಯದ ಕಡೆಯಲ್ಲಿ ದಧ್ಯನ್ (ಅಥರ್ವಣನ ಮಗ) ಎಂಬ ಋಷಿ ಅಶ್ವಿನೀಕುಮಾರರಿಗೆ ಬೋಧಿಸಿದ ಮಧುವಿದ್ಯೆಯ ಗುರು-ಶಿಷ್ಯ ಸಂವಾದ ಮತ್ತು ಮಧುವಿದ್ಯಾ ಪರಂಪರೆ ಉಕ್ತವಾಗಿದೆ.  

	ಮೂರನೆಯ ಅಧ್ಯಾಯದಲ್ಲಿ ಒಂಬತ್ತು ಬ್ರಾಹ್ಮಣಗಳಿವೆ.  ಮೊದಲನೆಯ ಬ್ರಾಹ್ಮಣದಲ್ಲಿ ಜನಕರಾಜ ಆರಂಭಿಸಿದ್ದ ಯಾಗಕ್ಕೆ ಕರೆಯಿಸಿದ ಅನೇಕ ಬ್ರಾಹ್ಮಣರಿಗೂ ಯಾಜ್ಞವಲ್ಕ್ಯನಿಗೂ ನಡೆದ ಬ್ರಹ್ಮವಿಷಯಕ ಸಂವಾದವಿದೆ.  ಂiÀiಜ್ಞವಲ್ಕ್ಯ ಅವರ ಪ್ರಶ್ನೆಗಳಿಗೆ ಸದುತ್ತರವಿತ್ತು ರಾಜನಿಂದ ಸನ್ಮಾನಿತನಾಗುತ್ತಾನೆ. 

	ನಾಲ್ಕನೆಯ ಅಧ್ಯಾಯದಲ್ಲಿ ಒಂಬತ್ತು ಬ್ರಾಹ್ಮಣಗಳಿವೆ.  ಇಲ್ಲಿ ಯಾಜ್ಞವಲ್ಕ್ಯ ಜನಕರಾಜನಿಗೆ ಮಾಡಿದ ಆತ್ಮ ತತ್ತೋಪದೇಶ ಮಹತ್ತ್ವ ಪೂರ್ಣವಾಗಿದೆ.  ಮೂರನೆಯ ಬ್ರಾಹ್ಮಣದಲ್ಲಿ ಆನಂದಮೀಮಾಂಸೆ ಉಕ್ತವಾಗಿದೆ.  ಅದರ ಕಡೆಯಲ್ಲಿ ಲೋಕದಲ್ಲಿರುವ ಎಲ್ಲ ಆನಂದಗಳಿಗಿಂತ ಅತ್ಯಂತ ಶ್ರೇಷ್ಠವಾದದ್ದೇ ಬ್ರಹ್ಮಾನಂದ, ಪರಮಾನಂದ ಎಂಬ ಸಂದೇಶವಿದೆ.  ಇದನ್ನು ಕೇಳಿದ ಜನಕರಾಜ ಸಂತುಷ್ಟನಾಗಿ ಅಲಂಕರಿಸಿದ ಸಾವಿರ ಆಕಳುಗಳನ್ನು ಯಾಜ್ಞವಲ್ಕ್ಯನಿಗೆ ಕೊಡುವುದಾಗಿ ಹೇಳಿ ಅವನಿಂದ ಮುಕ್ತಿಮಾರ್ಗವನ್ನು ಯಾಚಿಸುತ್ತಾನೆ. 

	ಐದನೆಯ ಬ್ರಾಹ್ಮಣದಲ್ಲಿ ಯಾಜ್ಞವಲ್ಕ್ಯ ತಾನು ಸಂನ್ಯಾಸವನ್ನು ಸ್ವೀಕರಿಸ ಬಯಸಿ, ಮೈತ್ರೇಯಿ ಮತ್ತು ಕಾತ್ಯಾಯಿನಿಯರೆಂಬ ಇಬ್ಬರು ಪತ್ನಿಯರಿಗೆ ತನ್ನ ಆಸ್ತಿಯನ್ನು ವಿಭಾಗ ಮಾಡುತ್ತಾನೆ.  ಅವರಲ್ಲಿ ಮೈತ್ರೇಯಿ ಬ್ರಹ್ಮವಾದಿನಿ,  ಕಾತ್ಯಾಯಿನಿ ಸಾಮಾನ್ಯ ಸ್ತ್ರೀ.  ಮೈತ್ರೇಯಿ ಕೇಳಿದಳು: ಸ್ವಾಮಿ, ಈ ಆಸ್ತಿಯಿಂದ ನಾನು ಅಮೃತಳಾಗುವನೇ ಎಂದು.  ಮೈತ್ರೇಯಿ ಕೇಳಿದ ಪ್ರಶ್ನೆಗೆ ಋಷಿ ಇಲ್ಲ! ಎಂದು ಹೇಳಿ ಆತ್ಮತತ್ತ್ವ ವಿಚಾರವನ್ನು ವಿಸ್ತರಿಸಿ ಹೇಳುತ್ತಾನೆ.  

	ಐದನೆಯ ಅಧ್ಯಾಯದಲ್ಲಿ ಹದಿನೈದು ಬ್ರಾಹ್ಮಣಗಳಿವೆ.  ಪೂರ್ಣಮದಃ ಪೂರ್ಣಮಿದಂ ಎಂಬ ಶಾಂತಿ ಮಂತ್ರದಿಂದ ಮೊದಲ ಬ್ರಾಹ್ಮಣ ಆರಂಭವಾಗುತ್ತದೆ.  ಎರಡನೆಯ ಬ್ರಾಹ್ಮಣದಲ್ಲಿ ಪ್ರಜಾಪತಿ ದೇವತೆಗಳು, ಮಾನವರು ಮತ್ತು ದಾನವರಿಗೆ ನೀಡಿದ ತತ್ತ್ವೋಪದೇಶ ಉಕ್ತವಾಗಿದೆ.  ಸತ್ತ್ವಗುಣವುಳ್ಳ ದೇವತೆಗಳಿಗೆ ಎಲ್ಲ ಸಂಪತ್ತು ಇರುವುದರಿಂದ ಅವರಿಗೆ ಇಂದ್ರಿಯ ದಮನ ಅಗತ್ಯ.  ಅದಕ್ಕಾಗಿ ದಮನಶೀಲರಾಗಿರಿ ಎಂದೂ ರಜೋಗುಣ ಪ್ರಧಾನರಾದ ಮಾನವರಿಗೆ ದಾನಶೀಲರಾಗಿರಿ ಎಂದೂ ತಮೋಗುಣ ಪ್ರಧಾನರಾದ ದಾನವರಿಗೆ ದಯೆಯುಳ್ಳವರಾಗಿರಿ ಎಂದೂ ಹೇಳಲಾಗಿದೆ.  

	ಆರನೆಯ ಅಧ್ಯಾಯದಲ್ಲಿ ಐದು ಬ್ರಾಹ್ಮಣಗಳಿವೆ.  ಎರಡನೆಯ ಬ್ರಾಹ್ಮಣದಲ್ಲಿ ಬರುವ ಜೈವಲಿ ಮತ್ತು ಶ್ವೇತ ಕೇತುಗಳಿಗೆ ನಡೆದ ಸಂವಾದ ಬಲು ಮಹತ್ತ್ವದ್ದು.  ಇದು ಪಂಚಾಗ್ನಿ ವಿದ್ಯೆಯನ್ನು ಕುರಿತದ್ದು.  ಮಾನವ ಪರಲೋಕಕ್ಕೆ ಹೇಗೆ ಹೋಗುವನು? ಅಲ್ಲಿಂದ ಮತ್ತೆ ಹೇಗೆ ಹಿಂದಿರುಗುವನು?  ಇಷ್ಟು ಜನರು ಆ ಲೋಕಕ್ಕೆ ಹೋದರೂ ಅದು ಏಕೆ ತುಂಬುವುದಿಲ್ಲ?  ಯಾವ ಆಹುತಿಯಿಂದ ಪುರುಷರೂಪ ತಳೆಯುವನು?  ದೇವಯಾನ ಮತ್ತು ಪಿತೃಯಾನಗಳು ಯಾವುವು?  ಎಂಬ ಐದು ಪ್ರಶ್ನೆಗಳ ವಿಚಾರ ಇಲ್ಲಿ ಬಂದಿದೆ.  ಬ್ರಹ್ಮಜ್ಞಾನದಿಂದ ಮುಕ್ತರಾದವರಿಗೆ ಪುನರಾಗಮನವಿಲ್ಲ.  ಉಳಿದ ಯಜ್ಞದಾನಾದಿಗಳು ಪುಣ್ಯವಂತರು ಸ್ವರ್ಗಾದಿ ಲೋಕಗಳಿಗೆ ಹೋಗಿ ಪುಣ್ಯ ಮುಗಿಯುವತನಕ ಅಲ್ಲಿದ್ದು, ಅನಂತರ ದ್ಯುಲೋಕಕ್ಕೆ (ಆಕಾಶ) ಬಂದು ವಾಯುವಿನಲ್ಲಿ ಸೇರಿ, ಮಳೆಯಾಗಿ ಪೃಥ್ವಿಗೆ ಬಿದ್ದು ಬೆಳೆಯ ಮೂಲಕ ಅನ್ನವಾಗಿ, ಪುರಷನಲ್ಲಿ ರೇತಸ್ಸಾಗಿ, ಪುಂಸ್ತ್ರೀಸಂಯೋಗದಿಂದ ಪುನರ್ಜನ್ಮ ತಳೆಯುವರೆಂಬ ವಿಚಾರ ಇಲ್ಲಿ ಉಕ್ತವಾಗಿದೆ.		
(ಎಂ.ಜಿ.ಎನ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ